ಬುಧವಾರ, ಜುಲೈ 3, 2013

ಬನಶಂಕರಿ ಬುತ್ತಿ



ಬನಶಂಕರಿ ಬುತ್ತಿ
ಬರ್ರೀ ಅಣ್ಣವ್ರ ಊಟ ಮಾಡಬರ್ರೀ, ಕೆನಿ-ಮೊಸರು ಐತಿ ಬರ್ರೀ, ಮಜ್ಜಿಗೆ ಕುಡಿಬರ್ರೀ ರೀತಿಯಾಗಿ ನಿಮ್ಮನ್ನು ಊಟಕ್ಕೆ ಕರೆಯುತ್ತಿರುವುದು ಎಲ್ಲಿ ಎಂದು ಅನುಮಾನವೇ? ಹಾಗಾದರೇ ನೀವು ಒಮ್ಮೆ ಬನಶಂಕರಿ ದೇವಾಲಯಕ್ಕೆ ಬರಬೇಕು. ಅಲ್ಲಿ ತಲೆಯ ಮೇಲೆ ಬುತ್ತಿಯ  ಬುಟ್ಟಿಯನ್ನು ಹೊತ್ತು ಕೊಂಡು ನಿಮನ್ನು ಅಲ್ಲಿನ ಮಹಿಳೆಯರು ಪ್ರೀತಿಯಿಂದ ಕರೆಯುವರು.
ಕನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬಾದಾಮಿಯಿಂದ ಮೂರು ಕಿ.ಮೀ. ದೂರದಲ್ಲಿರುವ ಬನಶಂಕರಿಯು ರಾಜ್ಯದಲ್ಲಿರುವ ಪ್ರಾಚೀನ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದೆಂದೂ ಪರಿಗಣಿಸಲ್ಪಟ್ಟಿದೆ. ಬನಶಂಕರಿಯು ಆದಿ ದೇವತೆ ಬನದೇವಿ, ಬನಶಂಕರಿ, ಅಥವಾ ಶಾಕಾಂಬರಿ ಎಂದು ಕರೆಯಲ್ಪಡುವುದು.  ಬನಶಂಕರಿದೇವಾಲಯವು ಚಾಲುಕ್ಯರ ಕಾಲದ ಸುಂದರ ದೇವಾಲಯವಾಗಿದೆ.
ಬಾದಾಮಿ ಬಯಲು ಪ್ರದೇಶವಾದರು, ಬನಶಂಕರಿ ದೇವಾಲಯವಿರುವ ಪ್ರದೇಶವು ಮಲೇನಾಡಿನ ನಿಸರ್ಗವನ್ನು ನೆನಪಿಗೆ ತರುವಂತೆ ಇದೆ.  ಸರಸ್ವತಿ ಹಳ್ಳವು ಸಮೀಪದಲ್ಲಿ ಹರಿಯುವುದರಿಂದ ತೆಂಗು, ಬಾಳೆ, ವಿಳ್ಳೆದೆಲೆ ತೋಟದ ಹಸಿರು ಅಲ್ಲಿ ಕಂಡುಬರುವುದು. ಬನಶಂಕರಿ ದೇವಾಲಯದ ಮುಂದಿರುವ ಹೊಂಡಕ್ಕೆ ಹರಿಶ್ಚಂದ್ರ ತೀರ್ಥವೆಂದು ಕರೆಯಲಾಗುತ್ತದೆ. ಹೊಂಡದ ಮೂರು ಕಡೆಯು ಸುಂದರ ಕಲ್ಲಿನ ಮಂಟಪವಿದೆ. ಪ್ರತಿ ವರ್ಷ ಸಂಕ್ರಾಂತಿಯ ತರುವಾಯ ಬರುವ ಬನದ ಹುಣ್ಣಿಮೆಯ ಸಮಯಕ್ಕೆ ಬನಶಂಕರಿಯ ದೇವಿಯ ಜಾತ್ರೆ ನಡೆಯುವುದು. ಲಕ್ಷಾಂತರ ಭಕ್ತಾದಿಗಳು ಅಲ್ಲಿಗೆ ಬರುವರು. ಸುಮಾರು ಒಂದು ತಿಂಗಳವರೆಗೆ ಜಾತ್ರೆಯು ನಡೆಯುತ್ತದೆ
   ಬನಶಂಕರಿಯಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆಯು ವಿಶೇಷವೆನಿಸಿದರೂ, ಅದಕ್ಕಿಂತಲೂ ವಿಶೇಷವೆನಿಸುವುದು ಇಲ್ಲಿ ಪ್ರತಿದಿವಸವು ಕಂಡುಬರುವ ಬನಶಂಕರಿಯ ಬುತ್ತಿ. ಬಾದಾಮಿಯಲ್ಲಿ  ಪ್ರವಾಸಿಗರಿಗೆ ತಿಂಗಳಾನುಗಟ್ಟಲೆ ನೋಡಲು ಬೇಕಾದಷ್ಟು ಪ್ರದೇಶಗಳಿವೆ. ರೀತಿಯ ಹಲವಾರು ಪ್ರದೇಶಗಳಲ್ಲಿ ನಂತರ ಒಂದೊಂದು ನೆನಪಿಗೆ ಬರದೇ ಇರಬಹುದು.   ಆದರೇ ಬನಶಂಕರಿ ದೇವಾಲಯದಲ್ಲಿ  ಮನೆಯ ಊಟವನ್ನು ನೆನೆಪಿಗೆ ತರುವ  ಬನಶಂಕರಿಯ ಬುತ್ತಿ ಅದನ್ನು ಬಡಿಸುವ ಮಹಿಳೆಯರ ಪ್ರೀತಿ, ಅಕ್ಕರೆಯ ಮಾತು ಮಾತ್ರ ಬಾದಾಮಿಯ ಪ್ರವಾಸವನ್ನು ಚಿರಕಾಲ ನೆನಪಿನಲ್ಲಿಡುವುದು.

ಅತಿಥಿ ದೇವೊಭವ ಎಂದು ನಂಬಿರುವ ಭಾರತೀಯರ ಸಂಸ್ಕ್ರತಿಯನ್ನು ಬಿಂಬಿಸುವ ಬನಶಂಕರಿಯ ಬುತ್ತಿ ಕಾಲದಲ್ಲಿನ ಒಂದು ವಿಶೇಷವಾಗಿದೆ. ಬನಶಂಕರಿಗೆ ಬಂದಾಗ ಇಲ್ಲಿನ ಮಹಿಳೆಯರು ತಲೆಯ ಮೇಲೆ ಬುತ್ತಿಯ  ಬುಟ್ಟಿಯನ್ನು ಹೊತ್ತು ಕೊಂಡು ಬರ್ರೀ ಅಣ್ಣವ್ರ ಊಟ ಮಾಡಬರ್ರೀ, ಕೆನಿ-ಮೊಸರು ಐತಿ ಬರ್ರೀ, ಮಜ್ಜಿಗೆ ಕುಡಿಬರ್ರೀ ಎಂದು ಪ್ರೀತಿಯಿಂದ ಕರೆದಾಗ ಪ್ರವಾಸಿಗರು, ಭಕ್ತಾದಿಗಳು, ತಡ್ರೇವ್ವರ್ರೇ  ಬನಶಂಕರಿ ಅಮ್ಮಗ ಕಾಯಿ ವಡೆಸಿಕೊಂಡು ಹರಿಕೆ ಸಲ್ಲಸಿ ಬಂದು ಊಟ ಮಾಡ್ತಿವಿ ಎಂದು ಹೇಳಿ ಹರಿಕೆಯನ್ನು ಸಲ್ಲಿಸಿ ಊಟಕ್ಕೆ ಬರುತ್ತಾರೆ.
     ಬನಶಂಕರಿಯ ಬುತ್ತಿಯನ್ನು ಬಿಚ್ಚಿದಾಗ ಅಮೃತದ ಸವಿಯನ್ನ ತಂದುಕೊಡುವ ಹಲವಾರು ಭೋಜ್ಯಗಳಿರುವುದು.  ಬನಶಂಕರಿಯು ತನ್ನಲಿಗೆ ಬರುವ ಬಡವ-ಬಲ್ಲಿದ ನೆಂಬ ಬೇದವಿಲ್ಲದೆ ಎಲ್ಲರನ್ನು ಕಾಡುವ ಹಸಿವೆಯನ್ನು ತಣಿಸಲು ಇರುವುದು ಬುತ್ತಿಯಾಗಿದೆ. ಇದರಲ್ಲಿ ಸಜ್ಜಿ-ರೋಟ್ಟಿ, ಬಿಳಿ ಜೋಳದ ಕಡಕ್ ರೋಟ್ಟಿ, ಚೌಳಿಕಾಯಿ ಪಲ್ಲೆ, ಬದನೆಕಾಯಿ ಪಲ್ಲೆ, ಕಡಲೇಕಾಯಿ ಪಲ್ಲೆ, ಹೆಸರುಬೇಳೆಯ ಪಲ್ಲೆ, ಮಡಕೆ ಕಾಳಿನ ಉಸಳಿ, ಅಲಸಂಧಿ ಕಾಳಿನ ಪಲ್ಲೇ, ಹಸಿರು ತೋಪ್ಪಲು ಪಲ್ಲೆಗಳಾದ ರಾಜಗಿರಿ, ಸಬ್ಬಸಿಗೆ, ಮೆಂತ್ತೆ ಸೊಪ್ಪು, ಪುಂಡಿ ಪಲ್ಲೆ ನುಚ್ಚು, ಖುಸಬಿ ಪಲ್ಲೆ, ಹತ್ತರಕಿ ಪಲ್ಲೆ, ಹುಣಸಿ ತಕ್ಕು, ನಿಂಬೆ ಹಣ್ಣಿನ ಉಪ್ಪಿನಕಾಯಿ, ಊಟದೊಂದಿಗೆ ಕಡೆದು ತಿನ್ನಲು ಉಳ್ಳಾಗಡ್ಡಿ, ನೆಂಜಿಕೊಳ್ಳಲು ಶೇಗಾದ ಹಿಂಡಿ, ಗುರೆಳ್ಳ ಚಟ್ನಿ, ಅಗಸಿ ಹಿಂಡಿ, ಉತ್ತರ ಕನ್ನಡಿಗರ ವಿಶೇಷವಾದ ಕಲ್ಹನ ಚಟ್ನಿ ಕೆಂಪ್ಹಿಂಡಿ ಇದೆಲ್ಲವುಗಳ ಜೊತೆಗೆ ಸ್ವಾದಿಸ್ಟಿವಾದ ಕೆನೆ-ಮೊಸರು ಬುತ್ತಿಯಲ್ಲಿದೆ. ನಿಮಗೆ ಬೇಕಾದ ರೀತಿಯ ಆಹಾರವನ್ನು ಕೇಳಿ ಪಡೆಯಬಹುದು. ಅಲ್ಪ ಪ್ರಮಾಣದ ಹಣವನ್ನು ಅದಕ್ಕೆ ನೀಡಬೇಕಾಗುವುದು.
ಊಟಕ್ಕೆ ಬಡಿಸುವ ಮಹಿಳೆಯರು ಪಕ್ಕದಲ್ಲಿಯೇ ಕುಳಿತು ಪ್ರೀತಿಯಿಂದ ಊಟ ಬಡಿಸುತ್ತಾ ಅಕ್ಕರೆಯ ಮಾತುಗಳನ್ನ ಆಡುವಾಗ ಯಾವುದೋ ಕಾಲದ ಸಂಬಂಧ ಇವರೊಂದಿಗೆ ಇರುವಂತೆ ಅವರು ನಮಗೆ ಉಣ ಬಡಿಸಿದಂತೆ ಬಾಸ ವಾಗುತ್ತದೆ.    ಊಟವನ್ನು ನೀಡಿದ ತಾಯಿ ಹೋಗುವಾಗ ಸ್ವಲ್ಪ ಹೊತ್ತು ಆರಾಮ ಮಾಡಿ ಹೋಗ್ರೀ ಅಪ್ಪಾವ್ರೇ, ನಮ್ಮವ್ವ ಬನಶಂಕರಿ ನಿಮಗೆಲ್ಲಾ ಒಳ್ಳೆಯದನ್ನ ಮಾಡ್ಲಿ ಎಂದು ಹ್ರದಯ ತುಂಬಿ ಹರಸಿ ಹೋಗುತ್ತಾಳೆ. ಜಾತಿ, ಧರ್ಮ ಎಂದು ಹೊಡೆದಾಡುತ್ತಾ ಅಧಿಕಾರ, ಅಂತಸ್ತು, ದುಡ್ಡು ಎನ್ನುತ್ತಾ ಮಾಯಾ ಜಿಂಕೆಯ ಬೆನ್ನು ಹತ್ತಿರುವ ಸಮಾಜದಲ್ಲಿ ಬಂದವರಿಗೆಲ್ಲ ಸಮಾನವಾಗಿ ನೊಡುತ್ತಾ ಉತ್ತರ ಕನಾಟಕ ಶೈಲಿಯ ಊಟವನ್ನು ನೀಡುತ್ತಿರುವ ಬನಶಂಕರಿಯ ಬುತ್ತಿಯನ್ನು ನೀಡುತ್ತಿರುವ ಎಲ್ಲಾ ಮಹಿಳೆಯರು ನಿಜಕ್ಕೂ ಧನ್ಯರು. ನೀವು ಒಮ್ಮೆ ಬನಶಂಕರಿಗೆ ಹೋಗಿ ಬನ್ನಿ. 

ವಿವೇಕ ಬೆಟ್ಕುಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...