ಗುರುವಾರ, ಜನವರಿ 17, 2013

ಬಾಲ್ಯದ ನೆನಪು 2, ಮನೆಯ ಮೇಲೆ ಮರ ಬಿದ್ದು ನಾವೆಲ್ಲ ಬದುಕುಳಿದಾಗ.....



ಮನೆಯ ಮೇಲೆ ಮರ ಬಿದ್ದು ನಾವೆಲ್ಲ ಬದುಕುಳಿದಾಗ.......
ಶಿರಸಿ ತಾಲ್ಲೂಕು ಕಂಡ್ರಾಜಿ ಒಂದು ಪುಟ್ಟ ಗ್ರಾಮವಾಗಿತ್ತು. ನನ್ನ ಬಾಲ್ಯದ ಜೀವನ ಪೂ ಕಂಡ್ರಾಜಿಯಲ್ಲಿಯೇ ಕಳೆದಿರುವುದು. ಕಂಡ್ರಾಜಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಅಮ್ಮ ಶಿಕ್ಷಕಿ, ಅಪ್ಪ ಅಲ್ಲಿಂದ ಮೂರು ಕಿ.ಮೀ ದೂರವಿರುವ ಕೊರ್ಲಕಟ್ಟಾದಲ್ಲಿ ಶಿಕ್ಷಕರು. ದಿನಾಲು ಅಪ್ಪ, 5 ನೇ ತರಗತಿಯಲ್ಲಿ ಓದುತ್ತಿರುವ ನನ್ನ ಅಣ್ಣ, 7 ರಲ್ಲಿಇರುವ ನನ್ನ ಅಕ್ಕ ಊಟ ಕಟ್ಟಿಕೊಂಡು ಕೊರ್ಲಕಟ್ಟಾ ಶಾಲೆಗೆ ಬೆಳ್ಳಿಗೆ ಹೋಗಿ ಸಂಜೆ ಬರುತ್ತಿದ್ದರು.   ಕಂಡ್ರಾಜಿ ಶಾಲೆಯ ಪಕ್ಕದಲ್ಲಿಯೇ ನಮ್ಮ ಬಾಡಿಗೆ ಮನೆಯಿತ್ತು. ಮನೆಯಲ್ಲಿ ನಮ್ಮ ಜೊತೆ ನಮ್ಮ ಚಿಕ್ಕಮ್ಮ ಸಹಾ ವಾಸಿಸುತ್ತಿದ್ದರು. ನಮ್ಮ ಮನೆಯ ಪಕ್ಕದಲ್ಲಿಯೇ ತದಡಿ ಗ್ರಾಮದ ಉಷಾ ಟೀಚರ್ ಇದ್ದರು ಅವರು ಸಹಾ ಕಂಡ್ರಾಜಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. 80 ದಶಕದಲ್ಲಿ ಇಲ್ಲಿ ಯಾವುದೇ ಆಧುನಿಕತೆಯ ಸುಳಿವಿರಲಿಲ್ಲ. ನಮ್ಮ ಮೂಲತ: ಊರು ಕುಮಟಾ ತಾಲ್ಲೂಕಿನ ಬೆಟ್ಕುಳಿ, ವೇಳೆಗೆ ದೂರವಾಣಿಯ ಸಂಪರ್ಕವೂ ಅಷ್ಟೊಂದು ಇರಲಿಲ್ಲ. ನಮ್ಮ ಊರಿನೊಂದಿಗೆ ಕೇವಲ ಪತ್ರ ವ್ಯವಹಾರ ಮಾತ್ರ ನಡೆಯುತ್ತಿತ್ತು.  ಬೇಸಿಗೆ ರಜೆ, ದಸರಾ ರಜೆಗೆ ನಾವು ಊರಿಗೆ ಬರುವ ರೂಢಿಯಿತ್ತು.
ಅಂದು 1990 ಜುಲೈ ತಿಂಗಳು ಮಲೆನಾಡಿನಲ್ಲಿ ಬಾರಿ ಮಳೆಯಾಗುತ್ತಿತ್ತು.  ತಿಂಗಳಿನ ಒಂದು ರವಿವಾರ ರಾತ್ರಿ ನಾವೆಲ್ಲರೂ ರಾತ್ರಿ 9.30 ಹೊತ್ತಿಗೆ ಊಟವನ್ನು ಮಾಡಿ ಮಲಗಿದ್ದೆವು. ಬಾರಿ ಗಾಳಿ, ಮಳೆ ಜೊತೆಗೆ ಚಳಿಯೂ ಸಹಾ ತುಂಬಾ ಇತ್ತು.  ನಮ್ಮ ಮನೆಯ ಪಕ್ಕದಲ್ಲಿಯೇ ಶಾಲೆ ಇತ್ತು. ಮನೆಯ ಹಿಂಬಾಗದಲ್ಲಿ ದೊಡ್ಡದಾದ ಮರವೊಂದು ಇತ್ತು.  ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಭೀಕರ ಗಾಳಿಯಿಂದ ಮನೆಯ ಮೇಲೆ ಏನೋ ಬಿದ್ದ ಹಾಗೇ ಅನಿಸಿತು. ತಕ್ಷಣ ಎಚ್ಚೆತ್ತ ನನ್ನ ಅಪ್ಪ ಮನೆಯ ಎದುರುಗಡೆ ಮರದ ದೊಡ್ಡದಾದ ಕೊಂಬೆಯೊಂದು ಬಿದ್ದಿರುವುದನ್ನು ಕಿಟಕಿಯಿಂದ ನೋಡಿ ತಕ್ಷಣ ನನ್ನ ಮತ್ತು ನನ್ನ ಅಣ್ಣನನ್ನು ಎಬ್ಬಿಸಿ ಮನೆಯ ಮೇಲೆ ಮರ ಬಿದ್ದಿರುವುದು ತಕ್ಷಣ ಶಾಲೆಯ ಬಳಿ ಹೋಗಿರಿ ಎಂದು ಬಾಗಿಲು ತೆರೆದು ಹೊರಗೆ ಓಡಿಸಿದರು. ಮಳೆಯಲ್ಲಿ ನಾನು, ಅಣ್ಣ ತೊಯುತ್ತಾ ಮನೆಯಿಂದ ಹೋರಗೆ ಓಡಬೇಕು ಎನ್ನುವುದರಲ್ಲಿ ಮನೆಯ ಹಿಂಬಾಗದಲ್ಲಿ ಇದ್ದ  ಬೃಹದಾಕಾರದ ಮರ ನೇರವಾಗಿ ಮನೆಯ ಮೇಲೆ ಬಂದೆ ಬಿಟ್ಟಿತ್ತು. ನನ್ನ ಅಣ್ಣ ಹೋಗಿ ಶಾಲೆಯ ಬಳಿ ಸೇರಿದ ನಾನು ಪುನ; ಒಳಗೆ ಬಂದು ತಿರುಗಿ ಓಡಿ ಶಾಲೆಯ ಬಳಿ ಸೇರಿದೆನು. ತಕ್ಷಣ ಅಪ್ಪ ನನ್ನ ಅಕ್ಕ, ಚಿಕ್ಕಮ್ಮ, ಅಮ್ಮ ಎಲ್ಲರನ್ನು ಎಬ್ಬಿಸಿ ಶಾಲೆಯ ಹತ್ತಿರ ಕಳುಹಿಸಿದರು. ಪಕ್ಕದ ಉಷಾ ಟೀಚರ ಸಹಾ ಓಡಿ ಬಂದು ನಾವೆಲ್ಲರೂ ಶಾಲೆಯ ಬಳಿ ಸೇರಿಕೊಂಡೆವು. ಎಲ್ಲರಿಗೂ ಮನೆಯ ಹಂಚಿನ ತುಣುಕು ಬಿದ್ದು ಚಿಕ್ಕ ಪುಟ್ಟ ಗಾಯವಾಗಿತ್ತು. ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೆವು.  ರಾತ್ರಿಯಲ್ಲಿ ಗದ್ದೆಗೆ ನೀರು ಬಿಡಲು ಹೋಗಿ ಹಿಂದಿರುತ್ತಾ ಇದ್ದ ಅದೇ ಊರಿನ ಈಶ್ವರ ನಾಯ್ಕರು ಬಂದು ನಮ್ಮನ್ನು ಸಮಧಾನ ಪಡಿಸುತ್ತಿದ್ದರು. ದೇವರು ದೊಡ್ಡವನ್ನು ನಾವೆಲ್ಲ ಬದುಕಿದೆವು. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದು ನಾವೆಲ್ಲ ಸತ್ತೆ ಹೋಗುತ್ತಿದ್ದೆವು ಎಂದು ಅಪ್ಪ ಅಳುತ್ತಿದ್ದರು. ಅಮ್ಮ ಸುಮ್ಮನೆ ಕುಳಿತ್ತಿದ್ದರು.  ನಿಜವಾಗಿಯೂ ಮನೆಯ ಮೇಲೆ ಬಿದ್ದ ಮರದ ಗಾತ್ರ, ಅದು ಬಿದ್ದ ರೀತಿ ನೋಡಿದರೆ ನಾವು ಬದುಕುವ ಸಾಧ್ಯತೆ ತುಂಬಾ ಕಡಿಮೆ ಇತ್ತು ಎಂದು ಬೆಳ್ಳಿಗೆ ನೋಡಿದಾಗ ಗೊತ್ತಾಗುತ್ತಿತ್ತು.
ಪುಟ್ಟ ಗ್ರಾಮ ಕಂಡ್ರಾಜಿಯಲ್ಲಿ ದಿನ ಯಾರು ಕೆಲಸ ಮಾಡಲಿಲ್ಲ. ಎಲ್ಲರೂ ಮಾಸ್ತರ ಮನೆಯ ಮೇಲೆ ಮರ ಬಿದ್ದಿದೆ ಎಂದು ರೊಟ್ಟಿ, ಪಲ್ಯ ಅದು ಇದು ಎಂದು ಹಲವಾರು ರೀತಿಯ ತಿಂಡಿ, ಊಟದ ವ್ಯವಸ್ಥೆಯನ್ನು ಶಾಲೆಯಲ್ಲಿರುವ ನಮಗೆ ತಂದು ಕೊಡುತ್ತಿದ್ದರು. ಬೆಳ್ಳಿಗೆ ಊರಿನವರು ಎಲ್ಲರು ಬಂದು ಮುಂದೆ ಏನು ಎಂದು ಸುತ್ತಿದ್ದಾಗ ಪಟೇಲ ಅಜ್ಜ ಬಂದು, ಮಾಸ್ತರೆ ಏನು ಯೋಚನೆ ಮಾಡಬೇಡಿ ನನ್ನ ಭತ್ತದ ಕಣಜದ ಮನೆಯಲ್ಲಿ ನೀವು ಉಳಿದುಕೊಳ್ಳುವ ವ್ಯವಸ್ಥೆ ಮಾಡುವೆನು ಎಂದು ಹೇಳಿ ತನ್ನ ಮಗನನ್ನು ಕರೆದು ಕಣಜದ ಮನೆಯನ್ನು ಸ್ವಚ್ಛಗೊಳಿಸಲು ಆದೇಶಿಸಿದರು. ಅದರಂತೆ ಉಷಾ ಟೀಚರಿಗೂ ಅಲ್ಲಿಯೇ ಪಕ್ಕದ ಮನೆಯೊಂದರಲ್ಲಿ ರೂಮಿನ ವ್ಯವಸ್ಥೆ ಆಯಿತು.  ಇಂದಿಗೂ ಘಟನೆಯನ್ನು ನೆನಸಿಕೊಂಡರೆ ಮೈ ಜುಮ್ ಏನುವುದು ಮತ್ತು ಕಂಡ್ರಾಜಿಯ ಗ್ರಾಮಸ್ಥರ ಪ್ರೀತಿ ಕಣ್ಣ ಎದುರಿಗೆ ಬರುವುದು.  ಇಂದು ಕಂಡ್ರಾಜಿ ಗ್ರಾಮ ಆಧುನಿಕ ಹಳ್ಳಿಯಾಗಿದೆ. ಇಂದಿಗೂ ನನ್ನ ಅಮ್ಮ ಅದೇ ಶಾಲೆಯಲ್ಲಿ ಶಿಕ್ಷಕಿ ಇರುವರು. ಘಟನೆಯನ್ನು ನೆನೆಸಿಕೊಂಡಾಗ ಇಂದಿಗೂ  ಕಣ್ಣಂಚಿನಲ್ಲಿ ನೀರು ಬರುವುದು.
                                                                                                                                                                 ವಿವೇಕ ಬೆಟ್ಕುಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...